ದಕ್ಷಿಣ ಆಸ್ಟ್ರೇಲಿಯ -
	ಕಾಮನ್‍ವೆಲ್ತ್ ಒಕ್ಕೂಟದ ಸ್ವತಂತ್ರ ದೇಶ ಆಸ್ಟ್ರೇಲಿಯ ಖಂಡದ ಒಂದು ರಾಜ್ಯ. ಆಸ್ಟ್ರೇಲಿಯದ ಮಧ್ಯದಲ್ಲಿ ದಕ್ಷಿಣಭಾಗದಲ್ಲಿದೆ. ಹಬ್ಬಗಳ ಮತ್ತು ವೈನ್(ದ್ರಾಕ್ಷಾರಸ) ರಾಜ್ಯವೆಂದು ಹೆಸರಾಗಿರುವ ಇದನ್ನು ಉತ್ತರದಲ್ಲಿ ಆಸ್ಟ್ರೇಲಿಯದ ಉತ್ತರ ಪ್ರಾಂತ್ಯ, ಈಶಾನ್ಯದಲ್ಲಿ ಕ್ವೀನ್ಸ್‍ಲ್ಯಾಂಡ್, ಪಶ್ಚಿಮದಲ್ಲಿ ಪಶ್ಚಿಮ ಆಸ್ಟ್ರೇಲಿಯ, ಪೂರ್ವದಲ್ಲಿ ವಿಕ್ಟೋರಿಯ ಮತ್ತು ನ್ಯೂಸೌತ್ ವೇಲ್ಸ್, ದಕ್ಷಿಣದಲ್ಲಿ ಗ್ರೇಟ್ ಆಸ್ಟ್ರೇಲಿಯನ್ ಬೈಟ್ ಮತ್ತು ಹಿಂದೂಸಾಗರ ಸುತ್ತುವರೆದಿದೆ. ಪಶ್ಚಿಮ ಉತ್ತರ ಪೂರ್ವಗಳಲ್ಲಿ ಅನುಕ್ರಮವಾಗಿ ಪೂ.ರೇ. 1290, ದ.ಅ. 260 ಮತ್ತು ಪೂ.ರೇ. 1410 ಉದ್ದಕ್ಕೆ ಹಬ್ಬಿರುವ ಈ ರಾಜ್ಯದ ವಿಸ್ತೀರ್ಣ 9,83,482 ಚ.ಕಿ.ಮೀ. ಆಸ್ಟ್ರೇಲಿಯದ ವಿಸ್ತೀರ್ಣದ ಎಂಟನೆಯ ಒಂದರಷ್ಟು ಇರುವ ಈ ರಾಜ್ಯದ ಜನಸಂಖ್ಯೆ 15,40,200(2005). ಆಸ್ಟ್ರೇಲಿಯದ ಒಟ್ಟು ಜನಸಂಖ್ಯೆಯಲ್ಲಿ 5ನೇ ಸ್ಥಾನ ಹೊಂದಿದೆ; ಜನಸಂಖ್ಯೆ ಕಡಲ ತೀರದಲ್ಲಿ ಸಾಂದ್ರೀಕೃತವಾಗಿದೆ. ಶೇಕಡ ಸುಮಾರು 70 ರಷ್ಟು ಜನ ರಾಜಧಾನಿ ಆಡಿಲೇಡಿನಲ್ಲಿದ್ದಾರೆ.

	ಮೇಲ್ಮೈಲಕ್ಷಣ : ರಾಜ್ಯದ ಅಧಿಕ ಭಾಗ ಚಪ್ಪಟೆ. ಶೇಕಡ 80 ರಷ್ಟು ಪ್ರದೇಶ ಸಮುದ್ರಮಟ್ಟದಿಂದ 300 ಮೀ. ಗಳಿಗೂ ಕಡಿಮೆ ಎತ್ತರದಲ್ಲಿದೆ. ವಾಯುವ್ಯದಲ್ಲಿ ತಗ್ಗಾದ ಪ್ರಸ್ಥಭೂಮಿಗಳೂ ಈಶಾನ್ಯದಲ್ಲಿ ಐರ್ ಮುಂತಾದ ತೆಟ್ಟೆಯಾದ ಸರೋವರ ಪ್ರದೇಶಗಳೂ ಇವೆ. ವಾಯುವ್ಯದಲ್ಲಿ ಉತ್ತರ ಪ್ರದೇಶದ ಗಡಿಯ ಬಳಿ ಮಸ್ಗ್ರೇವ್ ಪರ್ವತಶ್ರೇಣಿ ಹಬ್ಬಿದೆ. ಇದರ ಅತ್ಯುನ್ನತ ಶಿಖರ ವುಡ್‍ರಫ್ (1,440 ಮೀ). ಪೂರ್ವದಲ್ಲಿ ಫ್ಲಿಂಡರ್ಸ್ ಪರ್ವತಶ್ರೇಣಿಯಿದೆ. ದಕ್ಷಿಣ ಆಸ್ಟ್ರೇಲಿಯದ ಪಶ್ಚಿಮ ಭಾಗದಲ್ಲಿರುವ ಗ್ರೇಟ್ ವಿಕ್ಟೋರಿಯ ಮರುಭೂಮಿ ಮತ್ತು ನಲ್ಲಾರ್ಬರ್ ಬಯಲು ಪಶ್ಚಿಮ ಆಸ್ಟ್ರೇಲಿಯಕ್ಕೂ ಹಬ್ಬಿವೆ. ಆಗ್ನೇಯದಲ್ಲಿರುವ ಅನೇಕ ಜಲಾಶಯಗಳಲ್ಲಿ ಟಾರೆನ್ಸ್ ಮತ್ತು ಗೇರ್ಡ್‍ನರ್ ಸರೋವರಗಳು ದೊಡ್ಡವು. ಈ ರಾಜ್ಯದ ಅನೇಕ ನದಿಗಳಲ್ಲಿ ಮಳೆ ಬಂದಾಗ ಮಾತ್ರ ನೀರಿರುತ್ತದೆ. ರಾಜ್ಯದ ಪೂರ್ವ ಪ್ರದೇಶಗಳಲ್ಲಿ ನೆಲದಲ್ಲಿ ತಳಗಡೆ ಹರಿಯುವ ಜಲಪ್ರವಾಹಗಳಿವೆ. ಇವು ಅನೇಕ ಕಡೆಗಳಲ್ಲಿ ಜ್ವಾಲಾಮುಖಿಗಳಂತೆ 130 ಅಡಿಗಳ ವರೆಗಿನ ಎತ್ತರದ ನೀರಿನ ಬುಗ್ಗೆಗಳಾಗಿ ಚಿಮ್ಮುತ್ತವೆ. ದಕ್ಷಿಣದಲ್ಲಿ ಸಮುದ್ರತೀರದಲ್ಲಿ ಜಲಸಂಚಾರ ಯೋಗ್ಯವಾದ ಎರಡು ದೊಡ್ಡ ಖಾರಿಗಳುಂಟು. ಇವುಗಳ ಮಧ್ಯದಲ್ಲಿ ಮೂವತ್ತು ಮೈಲಿ ಅಗಲವಿರುವ ಯಾರ್ಕ್ ಪರ್ಯಾಯದ್ವೀಪವಿದೆ. ಪೂರ್ವದ ಸೇಂಟ್ ವಿನ್ಸೆಂಟ್ ಖಾರಿಯ ಅಗಲ 160 ಕಿ.ಮೀ. ಆಡಿಲೇಟ್ ಪಟ್ಟಣ ಇದರ ಪೂರ್ವತೀರದಲ್ಲಿದೆ. ಈ ಖಾರಿಯ ಎರಡು ಪಟ್ಟು ಉದ್ದವಿರುವ ಸ್ಪೆನ್ಸರ್ ಖಾರಿಯ ಉತ್ತರದ ತೀರದಲ್ಲಿ ಕೈಗಾರಿಕಾ ನಗರಗಳಾದ ಪೋರ್ಟ್ ಪಿರೀ, ಪೋರ್ಟ್ ಆಗಸ್ಟ್ ಮತ್ತು ಹ್ವೈಯಾಲ ಇವೆ. ನ್ಯೂ ಸೌತ್ ವೇಲ್ಸ್ ಮತ್ತು ವಿಕ್ಟೋರಿಯ ರಾಜ್ಯಗಳ ಗಡಿಯಲ್ಲಿ ಉಗಮಿಸಿ ದಕ್ಷಿಣ ಆಸ್ಟ್ರೇಲಿಯವನ್ನು ಪ್ರವೇಶಿಸಿ ಆಗ್ನೇಯದಲ್ಲಿ ಹರಿಯುವ ಮರೀ ಈ ರಾಜ್ಯದ ಅತ್ಯಂತ ದೊಡ್ಡ ನದಿ. ಈ ನದಿ ಒಟ್ಟು 2,589 ಕಿ.ಮೀ. ದೂರ ಹರಿದು ಹಿಂದೂ ಮಹಾಸಾಗರ ಸೇರುತ್ತದೆ.

	ವಾಯುಗುಣ : ರಾಜ್ಯದ ಮಾದ್ಯ ಉಷ್ಣತೆ ಬೇಸಗೆಯಲ್ಲಿ ದಕ್ಷಿಣದಲ್ಲಿ 650ಈ. ಉತ್ತರದಲ್ಲಿ 800ಈ-850ಈ. ಚಳಿಗಾಲವಾದ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ವಾಯುಗುಣ ತಂಪಾಗಿರುತ್ತದೆ. ಆಗ ರಾಜ್ಯದ ಮಾಧ್ಯ ಉಷ್ಣತೆ 500 ಈ-650ಈ. ರಾಜ್ಯದ ಶೇಕಡ 80ಕ್ಕಿಂತ ಹೆಚ್ಚು ಭಾಗದಲ್ಲಿ 10ಗಿಂತ ಕಡಿಮೆ ಮಳೆಯಾಗುತ್ತದೆ. ಇದು ವರ್ಷದ ಕೆಲವೇ ತಿಂಗಳುಗಳಲ್ಲಿ ಬೀಳುತ್ತದೆ. ವರ್ಷದ ಉಳಿದ ಕಾಲ ಶುಷ್ಕ. ಶೇ. 0.3ರಷ್ಟು ಪ್ರದೇಶದಲ್ಲಿ ಮಾತ್ರ 30 ಅಥವಾ ಹೆಚ್ಚು ಮಳೆ ಆಗುತ್ತದೆ. ಆಗ್ನೇಯದಲ್ಲಿರುವ ಕೆಲವು ಪ್ರದೇಶಗಳಲ್ಲಿ 35ಗಿಂತ ಹೆಚ್ಚು ಮಳೆಯಾಗುತ್ತದೆ. ಐರ್ ಸರೋವರದ ಸುತ್ತ ಇರುವ ಪ್ರದೇಶ ತೀರ ಶುಷ್ಕ. ರಾಜ್ಯದ ಉತ್ತರಾರ್ಧದ ಹೆಚ್ಚು ಭಾಗ ಶುಷ್ಕ. ಅಲ್ಲಿ ವರ್ಷದಲ್ಲಿ ಸರಾಸರಿ 5-10''ಮಳೆ ಬೀಳುತ್ತದೆ. ಉತ್ತರಾರ್ಧದ ದಕ್ಷಿಣ ಭಾಗ ಮತ್ತು ದಕ್ಷಿಣಾರ್ಧದ ಉತ್ತರ ಭಾಗ ಅತ್ಯಂತ ಶುಷ್ಕ. ಉತ್ತರದಲ್ಲಿ ಬೇಸಗೆಯಲ್ಲಿ ಮಾನ್‍ಸೂನ್ ಪರಿಣಾಮದಿಂದ ಆಗುವ ಮಳೆ ತುಂಬ ಅನಿಶ್ಚಿತ. ರಾಜ್ಯದಲ್ಲಿ ಕುಡಿಯುವುದಕ್ಕೂ ವ್ಯವಸಾಯಕ್ಕೂ ನೀರನ್ನು ಒದಗಿಸುವುದು ಒಂದು ಸಮಸ್ಯೆ. ಆಗ್ನೇಯದಲ್ಲಿ ಆಡಿಲೇಡಿನ ಹತ್ತಿರ ಇರುವ ಲಾಫ್ಟಿ ಶ್ರೇಣಿಯಲ್ಲಿ ಹುಟ್ಟಿ ಹರಿಯುವ ಅನೇಕ ತೊರೆಗಳಿಗೆ ಒಡ್ಡುಗಳನ್ನು ಹಾಕಿ ಆ ನಗರಕ್ಕೆ ನೀರನ್ನು ಒದಗಿಸಲಾಗುತ್ತದೆ. ಮರೀ ನದಿಯಿಂದಲೂ ನೀರನ್ನೊದಗಿಸಲಾಗುತ್ತದೆ. ಕೈಗಾರಿಕಾ ನಗರವಾದ ಹ್ವೈಯಾಲಕ್ಕೂ ಈ ನದಿಯಿಂದಲೇ ನೀರು ಸರಬರಾಜಾಗಬೇಕು. ಮರೀ ನದಿಯ ನೀರು ಕೃಷಿಗೂ ಉಪಯೋಗವಾಗುತ್ತದೆ. ರಾಜ್ಯದ ಒಳಭಾಗದಲ್ಲಿ ನೀರಿನ ಸಮಸ್ಯೆ ಇನ್ನೂ ಹೆಚ್ಚು ಬುಗ್ಗೆಗಳ ನೀರು ಸ್ವಲ್ಪಮಟ್ಟಿಗೆ ಈ ಬೇಡಿಕೆಯನ್ನು ಪೂರೈಸುತ್ತದೆ.

	ಸಸ್ಯಪ್ರಾಣಿವರ್ಗ : ಮರುಭೂಮಿಯಲ್ಲಿ ಯಾವ ಸಸ್ಯಗಳೂ ಬೆಳೆಯುವುದಿಲ್ಲ. ಉತ್ತರ ಮತ್ತು ದಕ್ಷಿಣಗಳ ಶುಷ್ಕ ಪ್ರದೇಶಗಳಲ್ಲಿ ಕುರಚಲು, ಹುಲ್ಲು, ಗುಲ್ಮ ಮೊದಲಾದವು ಮಾತ್ರ ಬೆಳೆಯುತ್ತವೆ. ಚೌಬೀನೆಯ ದೃಷ್ಟಿಯಿಂದ ರಾಜ್ಯದ ವೃಕ್ಷಗಳು ನಿರುಪಯೋಗಿ, ಫ್ಲಿಂಡರ್ಸ್ ಶ್ರೇಣಿಯಲ್ಲಿ ನೀಲಗಿರಿ ಮತ್ತು ದೇಶಿಯ ಪೈನ್ ಮರಗಳು ಅಲ್ಲಲ್ಲಿ ಹರಡಿವೆ. ಆಡಿಲೇಡಿನ ಹತ್ತಿರ ಇರುವ ಲಾಪ್ಠಿ ಶ್ರೇಣಿಯಲ್ಲಿ ದಟ್ಟ ಕಾಡುಗಳಿವೆ. ಅಲ್ಲಿ ನೀಲಗಿರಿ ವೃಕ್ಷಗಳು ಹೇರಳವಾಗಿವೆ. ಆಗ್ನೇಯದಲ್ಲಿ 1,70,000 ಎಕರೆಗಳಿಗೂ ಹೆಚ್ಚು ವಿಸ್ತಾರವಾದ ಮಾನವನಿರ್ಮಿತ ಅರಣ್ಯವಿದೆ. ಇದನ್ನು 19ನೆಯ ಶತಮಾನದ ಉತ್ತರಾರ್ಧದಲ್ಲಿ ಬೆಳೆಸಲಾಯಿತು. 

	 ಪೂರ್ವದ ರಾಜ್ಯಗಳೊಂದಿಗೆ ಹೋಲಿಸಿದರೆ ಈ ರಾಜ್ಯದ ವನ್ಯಮೃಗಗಳ ಸಂಖ್ಯೆ ಕಡಿಮೆ. ಕಾಂಗರು, ವಾಲಬಿ, ವಾಂಬ್ಯಾಟ್ ಮತ್ತು ಪೊದರು ಇಲಿಗಳು ಗಮನಾರ್ಹ ಸಂಖ್ಯೆಲ್ಲಿವೆ. ವಿವಿಧ ಬಗೆಯ ಪಕ್ಷಿಗಳು, ಹಲ್ಲಿಗಳು ಮತ್ತು ಹಾವುಗಳೂ ಇವೆ. ಕಡಲ ತೀರದಲ್ಲಿ ಅನೇಕ ಬಗೆಯ ಮೀನುಗಳುಂಟು. ಒಳನಾಡಿನಲ್ಲಿ ಮರೀ ನದಿಯನ್ನು ಬಿಟ್ಟರೆ ಉಳಿದಲ್ಲಿ ಅವು ವಿರಳ.

	ಜನಸಂಖ್ಯೆ : ರಾಜ್ಯದ ಜನಸಂಖ್ಯೆಯಲ್ಲಿ 3/4ಕ್ಕೂ ಹೆಚ್ಚು ಜನ ಆಸ್ಟ್ರೇಲಿಯನ್ ಸಂಜಾತರು. ಉಳಿದವರು ಬ್ರಿಟಿಷ್ ದ್ವೀಪಗಳಲ್ಲಿ ಇಲ್ಲವೇ ಯೂರೋಪಿನ ಇತರ ದೇಶಗಳಲ್ಲಿ ಹುಟ್ಟಿದವರು. ಆಂಗ್ಲಿಕನ್ ಚರ್ಚಿನ ಅನುಯಾಯಿಗಳು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಉಳಿದವರಲ್ಲಿ ಅರ್ಧ ಜನ ಮೆತಾಡಿಸ್ಟರು ಮತ್ತು ಉಳಿದರ್ಧ ರೋಮನ್ ಕ್ಯಾತೊಲಿಕರು. ಎರಡನೆಯ ಮಹಾ ಯುದ್ಧದ ಅನಂತರ ವಲಸೆಗಾರರಿಂದಾಗಿ ರಾಜ್ಯದ ಜನಸಂಖ್ಯೆ ತೀವ್ರಗತಿಯಲ್ಲಿ ಬೆಳೆಯಿತು.	

	ದಕ್ಷಿಣ ಆಸ್ಟ್ರೇಲಿಯದಲ್ಲಿ ಜನಸಾಂದ್ರತೆ ತೀರ ಅಸಮವಾಗಿದೆ. ಅಡಿಲೇಡ್ ನಗರ ಪ್ರದೇಶ ಜನಸಂಖ್ಯೆ 10,02, 327 (2001). ಇತರ ಪ್ರಮುಖ ನಗರಗಳಾದ ಹ್ವೆತ್‍ಯಾಲದಲ್ಲಿ 21,271, ಮೌಂಟ್ ಗ್ಯಾಂಬಿರ್ 22, 751, ಪೋರ್ಟ್‍ಪಿರೀ 13,633 ಮತ್ತು ಪೋರ್ಟ್ ಆಗಸ್ಟ್ 13,194 ಮಂದಿ ಎಲ್ಲಾ 2001ರ ಜನಗಣತಿಯಂತೆ. ಶೇಕಡ ಸುಮಾರು 15 ರಷ್ಟು ಜನ ಗ್ರಾಮಾಂತರ ವಾಸಿಗಳು.

	ಖನಿಜ ಸಂಪತ್ತು : ರಾಜ್ಯದಲ್ಲಿ ಖನಿಜ ಸಂಪತ್ತು ಹೆಚ್ಚಿಲ್ಲ. ಕೆಲವು ಪರ್ವತ ಶ್ರೇಣಿಗಳಲ್ಲಿ ಕಬ್ಬಿಣದ ಅದುರು ದೊರಕುತ್ತದೆ. ವಿಶ್ವದ ಕ್ಷೀರಸ್ಫಟಿಕ ಹೆಚ್ಚಾಗಿ ಬರುವುದು ಈ ರಾಜ್ಯದಿಂದ. ಆಸ್ಟ್ರೇಲಿಯಕ್ಕೆ ಅವಶ್ಯವಾದ ಉಪ್ಪು ಮತ್ತು ಜಿಪ್ಸಮ್‍ಗಳಲ್ಲಿ ಹೆಚ್ಚು ಭಾಗ ಇಲ್ಲಿಂದಲೇ ಸಾಗುತ್ತದೆ. ರಾಜ್ಯದ ಶ್ರಮಿಕ ಬಲದಲ್ಲಿ ಶೇ. 10ರಷ್ಟು ಮಂದಿ ಗಣಿಗಾರಿಕೆಯಲ್ಲಿ ನಿರತರಾಗಿದ್ದಾರೆ.

	ಕೈಗಾರಿಕೆ : ಮೋಟಾರು ವಾಹನಗಳ ತಯಾರಿಕೆ ಒಂದು ಮುಖ್ಯ ಕೈಗಾರಿಕೆ. ರಾಜ್ಯದ ಶ್ರಮಿಕ ಬಲದ ಶೇಕಡ 30 ರಷ್ಟು ಮಂದಿ ಕಾರ್ಮಿಕರು ಇದರಲ್ಲಿ ನಿರತರಾಗಿದ್ದಾರೆ. ಆಡಿಲೇಡಿನಲ್ಲಿ ಮತ್ತು ಅದರ ಹತ್ತಿರದಲ್ಲಿ ಲೋಹದ ಕೊಳವೆ ಮತ್ತು ನಾಳ, ರಾಸಾಯನಿಕಗಳ ಮತ್ತು ಜವಳಿ ಕೈಗಾರಿಕೆಗಳಿವೆ. ಪೋರ್ಟ್ ಆಡಿಲೇಡಿನ ಬಳಿ ಅಸ್ಬೋರ್ನ್‍ನಲ್ಲಿ ಸೋಡಾ ಆಷ್ ಕಾರ್ಖಾನೆಯಿದೆ. ಹ್ವೈಯಾಲ ನಗರದಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯಲ್ಲದೆ ಆಸ್ಟ್ರೇಲಿಯದ ಅತ್ಯಂತ ದೊಡ್ಡ ನೌಕಾಂಗಣಗಳಿವೆ. ಆಗ್ನೇಯದಲ್ಲಿ ರಟ್ಟು ಮತ್ತು ಕಾಗದದ ತಯಾರಿಕೆ ಕಾರ್ಖಾನೆಗಳು, ಮರ ಕೊಯ್ಯುವ ಯಂತ್ರಗಳು ಇವೆ. ಪೋರ್ಟ್ ಆಗಸ್ಪದಲ್ಲಿ ವಿದ್ಯುತ್ ಉತ್ಪಾದನ ಕೇಂದ್ರವೂ ಪೋರ್ಟ್ ಪಿರೀಯಲ್ಲಿ ಕಬ್ಬಿಣ ಅದುರನ್ನು ಕರಗಿಸುವ ಕಾರ್ಖಾನೆಯೂ ಇವೆ.

	ಕೃಷಿ : ರಫ್ತಿಗಾಗಿ ಗೋದಿ ಬಾರ್ಲಿಗಳನ್ನು ಹೆಚ್ಚಾಗಿ ಉತ್ಪಾದಿಸುವ ರಾಜ್ಯ ದಕ್ಷಿಣ ಆಸ್ಟ್ರೇಲಿಯ. ಆದರೆ ದ್ರಾಕ್ಷಿ ಬೆಳೆಯಲ್ಲಿ ಅದರ ವಿಶೇಷತೆ. ಆಸ್ಟ್ರೇಲಿಯದ ದ್ರಾಕ್ಷಿಯ 1/3 ಭಾಗ ಇಲ್ಲಿ ಬೆಳೆಯುತ್ತದೆ. ವೈನ್ ಮತ್ತು ಬ್ರಾಂದಿ ತಯಾರಾಗುತ್ತವೆ. ಕರಾವಳಿಯ ಕಡಲಿನಲ್ಲಿ ವಿಪುಲವಾಗಿರುವ ಟ್ಯೂನಾ ಮತ್ತು ಕ್ರೇಫಿಷ್ (ಮೀನು)ಗಳನ್ನು ಇತರ ರಾಜ್ಯಗಳಿಗೂ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿದೆ. ಉಣ್ಣೆ, ಮಾಂಸ ಮತ್ತು ಚರ್ಮಗಳನ್ನು ಒದಗಿಸುವ ಕುರಿಗಳಿವೆ. ತರಕಾರಿಯೂ ಇಲ್ಲಿಂದ ಇತರ ರಾಜ್ಯಗಳಿಗೆ ರಫ್ತಾಗುತ್ತದೆ.

ಸಾರಿಗೆ : ಒಳನಾಡಿನ ಸಾರಿಗೆ ಮಾರ್ಗಗಳು ಆಡಿಲೇಡಿನಲ್ಲಿ ಕೇಂದ್ರೀಕೃತವಾಗಿವೆ. ಬಹುತೇಕ ರೈಲುಮಾರ್ಗಗಳು ರಾಜ್ಯದ ಆಡಳಿತಕ್ಕೊಳಪಟ್ಟಿವೆ. ಆಸ್ಟ್ರೇಲಿಯದ ಪೂರ್ವ ತೀರದಲ್ಲಿರುವ ಸಿಡ್ನಿಯನ್ನು ಪಶ್ಚಿಮ ತೀರದ ಪರ್ತ್ ನಗರದೊಂದಿಗೆ ಕೂಡಿಸುವ ಖಂಡಾಂತರ ರೈಲುಮಾರ್ಗ ಆಸ್ಟ್ರೇಲಿಯ ಸರ್ಕಾರದ ಒಡೆತನಕ್ಕೆ ಸೇರಿದ್ದು. ಆಡಿಲೇಡ್‍ಗೂ ವಿಕ್ಟೋರಿಯ ರಾಜ್ಯದ ಮೆಲ್ಬರ್ನ್ ನಗರಕ್ಕೂ ಸಂಪರ್ಕ ಕಲ್ಪಿಸುವ ಒಂದು ರೈಲುಮಾರ್ಗವಿದೆ. ಮತ್ತೊಂದು ರೈಲುಮಾರ್ಗ ಆಡಿಲೇಡಿನಿಂದ ಹೊರಟು ಪೋರ್ಟ್ ಪಿರೀಯಲ್ಲಿ ಖಂಡಾಂತರ ರೈಲುಮಾರ್ಗವನ್ನು ಕೂಡುತ್ತದೆ. ಆಡಿಲೇಡ್, ಹ್ವೈಯಾಲ-ಇವು ರಾಜ್ಯದ ಮುಖ್ಯ ಬಂದರುಗಳು. ಸಿಡ್ನಿ ಮತ್ತು ಮೆಲ್ಬರ್ನ್ ನಗರಗಳೊಂದಿಗೆ ಆಡಿಲೇಡ್ ನಗರಕ್ಕೆ ವಿಮಾನ ಸಂಪರ್ಕವಿದೆ.

		ಆಡಳಿತ ಮತ್ತು ಸಾಮಾಜಿಕ ಸ್ಥಿತಿ : ರಾಷ್ಟ್ರರಕ್ಷಣೆ, ವಿದೇಶೀ ವ್ಯವಹಾರ, ಆರ್ಥಿಕ ನೀತಿ, ಸಮಾಜ ಕಲ್ಯಾಣ, ಹಡಗು ಸಾರಿಗೆ ಮತ್ತು ವಿಮಾನಸಂಚಾರ-ಇವು ಕೇಂದ್ರ ಸರ್ಕಾರದ ವಿಷಯಗಳು. ಶಿಕ್ಷಣ, ಆಸ್ಪತ್ರೆ, ವಸತಿ ಸೌಲಭ್ಯ, ಪೋಲಿಸ್, ಜೈಲು, ರೈಲ್ವೆ ಮತ್ತು ರಸ್ತೆ ಸಾರಿಗೆ ರಾಜ್ಯ ಸರ್ಕಾರದ ಆಡಳಿತಕ್ಕೊಳಪಟ್ಟಿವೆ. ಆಸ್ಟ್ರೇಲಿಯದ ಸಂಸತ್ತಿನ ಪ್ರತಿನಿಧಿಗಳ ಸಭೆಗೆ 12 ಸದಸ್ಯರನ್ನೂ ಸೆನೆಟ್ಟಿಗೆ 12 ಸದಸ್ಯರನ್ನೂ ರಾಜ್ಯ ಕಳಿಸುತ್ತದೆ. ರಾಜ್ಯ ಸಂಸತ್ತಿನಲ್ಲಿ ಸಭಾಸದನ (ಹೌಸ್ ಆಫ್ ಅಸೆಂಬ್ಲಿ) ಮತ್ತು ವಿಧಾನ ಪರಿಷತ್ತು ಎಂಬ ಎರಡು ಸದನಗಳಿವೆ. ಮೊದಲನೆಯದಕ್ಕೆ ಕಡ್ಡಾಯದ ಮತ್ತು ಸಾರ್ವತ್ರಿಕ ಮತದಾನದಿಂದ ಸದಸ್ಯರನ್ನು ಆರಿಸಲಾಗುತ್ತಿದೆ. ಎರಡನೆಯ ಸಭೆಗೆ ಮತಾಧಿಕಾರ ಪರಿಮಿತ ಮತ್ತು ಐಚ್ಛಿಕ. ರಾಜ್ಯಪಾಲ ಇಂಗ್ಲೆಂಡಿನ ರಾಜತ್ವದ ಪ್ರತಿನಿಧಿ. ಸಭಾಸದನಕ್ಕೆ ಸಂಯುಕ್ತವಾಗಿ ಹೊಣೆಯಾದ ಮಂತ್ರಿಗಳ ಸಲಹೆಯಂತೆ ಈತ ನಡೆಯುತ್ತಾನೆ. ಆ ಸಭೆಯ ನಾಯಕನೇ ಸಾಮಾನ್ಯವಾಗಿ ಮುಖ್ಯಮಂತ್ರಿಯಾಗುತ್ತಾನೆ. ಆಸ್ಟ್ರೇಲಿಯನ್ ಕಾರ್ಮಿಕ ಪಕ್ಷ ಮತ್ತು ಉದಾರವಾದಿ ಕೌಂಟಿ ಲೀಗ್-ಇವು ಎರಡು ಮುಖ್ಯ ರಾಜಕೀಯ ಪಕ್ಷಗಳು.

		ರಾಜ್ಯದ ಸರ್ವೋಚ್ಚ ನ್ಯಾಯಾಲಯದಲ್ಲಿ ರಾಜ್ಯಪಾಲನಿಂದ ನೇಮಿತರಾದ ಎಂಟು ನ್ಯಾಯಾಧೀಶರಿರುತ್ತಾರೆ. ಇದರ ನಿರ್ಣಯಗಳ ಮೇಲೆ ಆಸ್ಟ್ರೇಲಿಯದ ಉಚ್ಚ ನ್ಯಾಯಾಲಯಕ್ಕೆ ಮತ್ತು ಪ್ರಿವಿ ಕೌನ್ಸಿಲ್‍ಗೆ ಅಪೀಲು ಸಲ್ಲಿಸಬಹುದು.

		ಶಿಕ್ಷಣ : ಮಕ್ಕಳಿಗೆ 16ನೆಯ ವಯಸ್ಸಿನ ವರೆಗೆ ಕಡ್ಡಾಯ ಶಿಕ್ಷಣ ನೀಡಲಾಗುತ್ತಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲೂ ಶಿಕ್ಷಣ ಉಚಿತ, ಆಡಿಲೇಡ್ ಮತ್ತು ಫ್ಲಿಂಡರ್ಸ್ ವಿಶ್ವವಿದ್ಯಾಲಯಗಳು, ದಕ್ಷಿಣ ಆಸ್ಟ್ರೇಲಿಯನ್ ತಂತ್ರವಿಜ್ಞಾನ ಸಂಸ್ಥೆ-ಇವು ಉಚ್ಚ ಶಿಕ್ಷಣ ನೀಡುತ್ತವೆ. ಇವಲ್ಲದೆ ಒಂದು ಕೃಷಿ ಕಾಲೇಜು, ಕಲೆಗಳ ಶಾಲೆ ಮತ್ತು ಐದು ಶಿಕ್ಷಕರ ತರಬೇತಿ ಕಾಲೇಜುಗಳು ಇವೆ.

	ಇತಿಹಾಸ : 1627ರ ಸುಮಾರಿಗೆ ಡಚ್ ನಾವಿಕರು ಈಗಿನ ದಕ್ಷಿಣ ಆಸ್ಟ್ರೇಲಿಯ ಪ್ರದೇಶವನ್ನು ಕಂಡುಹಿಡಿದರು. 1644ರಲ್ಲಿ ಅಬೆಲ್ ಟಾಸ್ಮನ್ ಈ ಪ್ರದೇಶದ ಸರ್ವೇಕ್ಷಣೆ ನಡೆಸಿದ. 1802ರಲ್ಲಿ ಮ್ಯಾತೂಫ್ಲಿಂಡರ್ಸ್ ದಕ್ಷಿಣ ತೀರವನ್ನು ಸುತ್ತಿ ಭೂಪಟವನ್ನು ತಯಾರಿಸಿದ. ಸ್ಟೂಯರ್ಟ್ 1828ರಲ್ಲಿ ಮರೀ ನದಿಯ ಮುಖದ ವರೆಗೆ ಸಂಚರಿಸಿದ. 1834ರಲ್ಲಿ ಮೊದಲಿನ ನೆಲಸಿಗರು ಕಾಂಗರೂ ದ್ವೀಪದಲ್ಲಿ ಬಂದಿಳಿದರು. ಆದರೆ ಶೀಘ್ರದಲ್ಲೇ ವಿಸ್ತಾರ ಭೂಭಾಗದಲ್ಲಿ ಜನ ನೆಲಸಲಾರಂಭಿಸಿದರು. ದಕ್ಷಿಣ ಆಸ್ಟ್ರೇಲಿಯ ಕಂಪನಿ ಎಂಬ ಸಂಸ್ಥೆ ವ್ಯವಸಾಯದಲ್ಲಿ ನೆಲಸಿಗರಿಗೆ ಸಹಾಯ ನೀಡಿತು. 1836ರ ಡಿಸೆಂಬರ್ 28 ರಂದು ದಕ್ಷಿಣ ಆಸ್ಟ್ರೇಲಿಯವನ್ನು ಬ್ರಿಟಿಷ್ ಪ್ರಾಂತ್ಯವೆಂದು ಘೋಷಿಸಲಾಯಿತು. ಅಡಿಲೇಡ್ ನಗರದ ಸ್ಥಾಪನೆಯಾದ್ದು 1842ರಲ್ಲಿ. 1856ರಲ್ಲಿ ಹೊಸ ಸಂವಿಧಾನ ಅಸ್ತಿತ್ವಕ್ಕೆ ಬಂತು. ಬಂಗಾರದ ಗಣಿಗಳ ಅಭಾವ, ಕೈದಿಗಳನ್ನು ವಸಾಹತಿಗೆ ಕಳಿಸಬಾರದೆಂಬ ನಿರ್ಣಯ-ಇವು ಹೆಚ್ಚು ಸ್ಥಿರವಾದ ಆರ್ಥಿಕ ಜೀವನಕ್ಕೆ ಸಹಕಾರಿಯಾದವು. ವಿಕ್ಟೋರಿಯ ಪ್ರಾಂತ್ಯದಲ್ಲಿ ಹೊಸ ಚಿನ್ನದ ಗಣಿಗೆ ಆದ ನುಗ್ಗಾಟದಿಂದ ಇಲ್ಲಿ ಕೃಷಿಗೆ ಪ್ರೋತ್ಸಾಹ ದೊರಕಿತು. 1870ರ ಸುಮಾರಿಗೆ ದಕ್ಷಿಣ ಆಸ್ಟ್ರೇಲಿಯದ ಗೋಧಿ ಆಸ್ಟ್ರೇಲಿಯದ ಮಾರುಕಟ್ಟೆಗಳಲ್ಲಿ ಅಮೆರಿಕದ ಗೋದಿಯ ಸ್ಥಾನವನ್ನು ಆಕ್ರಮಿಸಿತ್ತು. ಲೌಕಿಕ ಶಿಕ್ಷಣ ಕ್ರಮ ಜನರ ಪ್ರಗತಿಗೆ ಸಹಕಾರಿಯಾಯಿತು. ಕೃಷಿಯೊಂದಿಗೆ ಕುರಿಗಳ ಸಾಕಣೆಯೂ ಬೆಳೆಯಿತು. 1860-1900ರ ಅವಧಿಯಲ್ಲಿ ಇಡೀ ರಾಜ್ಯದ ಸರ್ವೇಕ್ಷಣೆ ನಡೆಯಿತು. ಇದು ಆಸ್ಟ್ರೇಲಿಯ ಸಮಧಿರಾಜ್ಯದ ಒಂದು ರಾಜ್ಯವಾದ್ದು 1901ರಲ್ಲಿ. ದಕ್ಷಿಣ ಆಸ್ಟ್ರೇಲಿಯದ ಭಾಗವಾಗಿದ್ದ ಉತ್ತರಪ್ರದೇಶ 1911ರಲ್ಲಿ ಪ್ರತ್ಯೇಕವಾಯಿತು.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ